ಪೌಸ್ತೋವ್‍ಸ್ಕಿ, ಕಾನ್‍ಸ್ತಾಂತಿನ್ ಗಿಯೊರ್ಗೆವಿಚ್
	1891-1968. ರಷ್ಯನ್ ಕಾದಂಬರಿಕಾರ. ಹುಟ್ಟಿದ್ದು ಮಾಸ್ಕೊ ನಗರದಲ್ಲಿ. ತಂದೆ ರೈಲ್ವೆ ನೌಕರ. ಉಕ್ರೈನ್ ಗಣರಾಜ್ಯದಲ್ಲಿ ಬಾಲ್ಯವನ್ನು ಕಳೆದು ಕೀವ್ ನಗರದಲ್ಲಿ ಶಾಲೆ ಸೇರಿ ಮುಂದೆ ಅದೇ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ. ಹುದ್ದೆಯನ್ನು ಅರಸಿ ಹೊರಟು ಸೈನಿಕನಾಗಿ, ಶಿಕ್ಷಕನಾಗಿ, ಡ್ರೈವರ್, ಕಂಡಕ್ಟರ್ ಆಗಿ, ಕೊನೆಗೆ ಮೀನುಗಾರನಾಗಿ - ಹೀಗೆ ಹಲವಾರು ಹುದ್ದೆಗಳಲ್ಲಿ ದುಡಿದ. ಈತನ ಮೊದಲ ಕಥೆ 1911ರಲ್ಲಿ ಕೀವ್ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. 
ಈತ ಮಾಸ್ಕೊ ನಗರಕ್ಕೆ ಬಂದ ಮೇಲೆ 1925ರಲ್ಲಿ ತನ್ನ ಮೊದಲ ಕೃತಿ ಮರ್‍ಸ್ಕೀಯೆ ನಬ್‍ರೋಸ್ಕಿಯನ್ನು (ಸಮುದ್ರ ಚಿತ್ರಗಳು) ಪ್ರಕಟಿಸಿದ. ಅನಂತರ ಕಾರಾಬುಗಾಸ್ó (ಕಪ್ಪುಖಾರಿ 1932) ಮತ್ತು ಕಲ್ಹೀದಾ (1934) ಎಂಬ ಕಾದಂಬರಿಗಳನ್ನು ಪ್ರಕಟಿಸಿದ. ಚಾರ್ಲ್ ಲೋನ್ಸೆವೀಲಿಯಾ (1933) ಸೆನಿರ್ನಯ ಪೋನ್ಸೆಸ್ತ್ (1938)-ಇವು ಐತಿಹಾಸಿಕ ವಸ್ತುಗಳನ್ನೊಳಗೊಂಡ ಕಾದಂಬರಿಗಳು. 

ರಷ್ಯದ ಹಳ್ಳಿಗಾಡಿನ ವರ್ಣನೆ ಈತನ ಅನೇಕ ಕೃತಿಗಳಲ್ಲಿ ಕಾಣಬರುತ್ತದೆ. ಈತನ ಕಥಾನಾಯಕರೂ ಅಷ್ಟೆ : ಪ್ರಾಮಾಣಿಕರು, ನೈತಿಕನಿಷ್ಠೆಗಾಗಿ ಹೋರಾಡುವವರು. ಈತನ ಚೋರ್ನಯ ಮೋರೈ (ಕಪ್ಪು ಸಮುದ್ರ 1936). ಜಲತಾಯ ರೋಸ (ಚಿನ್ನದ ಗುಲಾಬಿ 1956) ಪವ್ಯೆಸ್ತ್ ಅಷಿಸ್ನಿ (ನನ್ನ ಜೀವನದ ಕಥೆ - 1956). ಈ ಮೊದಲಾದ ಕಾದಂಬರಿಗಳು ರಷ್ಯನ್ನರ ಹೃದಯವನ್ನು ಸೊರೆಗೊಂಡಿವೆ. 
(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ